Independence Day Message of His Holiness Shankaracharya Swamiji in Kannada

15-08-2022

Independence Day Message of His Holiness Shankaracharya Swamiji in Kannada

ಶ್ರೀ ಚಂದ್ರಮೌಳೀಶ್ವರಾಯ ನಮ:
ಶ್ರೀ ಕಾಂಚೀ ಕಾಮಕೋಟೀ ಪೀಠಂ
ಜಗದ್ಗುರು ಶಂಕರಾಚಾರ್ಯ ಸ್ವಾಮಿಗಳು
ಶೀಮಠಂ ಸಂಸ್ಥಾನ, ಕಾಂಚೀಪುರಂ

ಭಾರತ ದೇಶದ 75ನೇ ವಾರ್ಷಿಕ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ
ಜಗದ್ಗುರು ಪೂಜ್ಯಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಸ್ವಾಮಿಗಳ ವಿಶೇಷ ಸಂದೇಶ
15 ಆಗಸ್ಟ್ 2022

 

ಭಾರತವರ್ಷವು ಪುಣ್ಯ ಭೂಮಿ, ಇದು ಬರೀ ಒಂದು ಭೌಗೋಳಿಕ ಪರಿಮಿತಿಗೆ ಒಳಪಟ್ಟ ಭೂಪ್ರದೇಶವಲ್ಲ; ಇದು ಮಹತ್ವದ ಸಂಸ್ಕೃತಿ, ನಾಗರೀಕತೆಯ ಮತ್ತು ಧರ್ಮದ ನೆಲೆಬೀಡು. ದೇವತೆಗಳಿಂದ ಹರಸಲಾದ, ಋಷಿಮುನಿಗಳಿಂದ ಪೋಷಿಸಲಾದ ಈ ಪುಣ್ಯಭೂಮಿಯು - ಶ್ರೀರಾಮನು ’ ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂದು ಲಕ್ಷ್ಮಣನಿಗೆ ಹೇಳಿದಂತೆ ನಮ್ಮ ಮಾತೃಭೂಮಿ, ತಾಯ್ನಾಡು.

ಈ ಪವಿತ್ರ ಭೂಮಿಯು ಕಳೆದ ನೂರಾರು ಶತಮಾನಗಳಲ್ಲಿ ಅದೆಷ್ಟೋ ಆಕ್ರಮಣಗಳನ್ನು ಮತ್ತು ಹಿಂಸೆಗಳನ್ನು ಎದುರಿಸಿದೆ. ಇಲ್ಲಿಯ ಪುರುಷರು, ಮಹಿಳೆಯರು, ಕುಟುಂಬಗಳು ಮಾತ್ರವಲ್ಲ ಇಡೀ ಸಮಾಜವೇ ನೆತ್ತರು ಹರಿಸಿ ಬಲಿದಾನ ಮಾಡಿರುವ ವೀರಗಾಥೆಗಳು, ತ್ಯಾಗಗಳು ಅನೇಕ ಅನೇಕ. ಕೊನೆಗೂ, 15 ಆಗಸ್ಟ್ 1947ರಂದು, 75 ವರ್ಷಗಳ ಹಿಂದೆ ಭಾರತ ’ಸ್ವತಂತ್ರ’ವಾಯಿತು. ಸಂಕೋಲೆಗಳನ್ನು ಕಿತ್ತೆಸೆದು ಮತ್ತೆ ಈ ಭಾರತ ಎದ್ದು ನಿಂತಿತು. ಈ ಸಂಕಷ್ಟದ ಕಾಲದಲ್ಲಿ ಜನರು ತಮ್ಮ ತಾಳ್ಮೆಯನ್ನು ಕಳೆದುಕೊಳ್ಳದೆ, ಭಗವಂತನಲ್ಲಿ ಭಕ್ತಿ ಮತ್ತು ತಮ್ಮ ದೇಶದ ಮೇಲಿನ ವಿಶ್ವಾಸವನ್ನು ಬಿಡದೆ ಎಲ್ಲ ವಿಪರೀತಗಳನ್ನೂ ಎದುರಿಸಿದರು.

ನಮ್ಮ ಪೂಜ್ಯ ಶ್ರೀ ಪರಮಾಚಾರ್ಯ ಮಹಾಸ್ವಾಮಿಗಳು (ಶ್ರೀ ಕಾಂಚೀ ಕಾಮಕೋಟಿ ಪೀಠದ 69 ನೇ ಪೀಠಾಧಿಪತಿಗಳಾದ ಪೂಜ್ಯಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಸ್ವಾಮಿಗಳು) ನಮ್ಮ ದೇಶಕ್ಕೆ ಸ್ವಾತಂತ್ರ ಬಂದ ಸಂದರ್ಭದಲ್ಲಿ ನೀಡಿದ ವಿಶೇಷ ಸಂದೇಶದಲ್ಲಿ ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಚಿಂತನೆಯ ಮಹತ್ವ, ನಮ್ಮ ರಾಷ್ಟ್ರಧ್ವಜದಲ್ಲಿರುವ ಮೂರು ಬಣ್ಣಗಳು ಹೇಗೆ ದುರ್ಗಾ, ಲಕ್ಷ್ಮೀ ಸರಸ್ವತೀಯರನ್ನು ಮತ್ತು ಮಧ್ಯದಲ್ಲಿರುವ ಚಕ್ರ ಹೇಗೆ ಧರ್ಮವನ್ನು ಗುರುತಿಸುತ್ತಿವೆ ಎಂದು ತಿಳಿಸಿದರು. ಅದಲ್ಲದೆ, ಪೂಜ್ಯರು ನಿಜವಾದ ಸ್ವಾತಂತ್ರ ಎಂದರೇನು, ಹೇಗೆ ಪ್ರತಿಯೊಬ್ಬ ಮನುಷ್ಯನೂ ತನ್ನನ್ನು ತಾನು ಅರಿತು ಸ್ವತಂತ್ರನಾಗಬೇಕೆಂಬುದನ್ನೂ ಹೇಳಿದರು. ಅದು ಸಾಧ್ಯವಾಗ ಬೇಕಾದರೆ ನಿರಂತರ ಸಾಧನೆಯಿಂದ ನಮ್ಮ ಮನಸ್ಸನ್ನು ಆ ಉನ್ನತ ಮಟ್ಟಕ್ಕೆ ಕೊಂಡೊಯ್ಯ ಬೇಕು.

ಈ ದೇಶವು ಪುನರುತ್ಥಾನವಾಗಿ 75 ವರ್ಷಗಳು ಕಳೆದಿವೆ. ಎಷ್ಟೋ ಅಭಿವೃದ್ಧಿಗಳು, ಎಷ್ಟೋ ಬದಲಾವಣೆಗಳಾಗಿವೆ. ಇವೆಲ್ಲದರಲ್ಲೂ ನಮ್ಮನ್ನು ನಿರಂತರವಾಗಿ ಮಾರ್ಗದರ್ಶನ ಮಾಡಿರುವುದು ನಮ್ಮ ಪುರಾತನ ಸಂಸ್ಕೃತಿ - ನಮ್ಮ ಸನಾತನ ಧರ್ಮ. ನಮ್ಮ ವೇದಗಳು ಮತ್ತು ಶಾಸ್ತ್ರಗಳು ಧರ್ಮ ಪರಿಪಾಲನೆಗೆ ಸಹಾಯಕವಾಗಿವೆ. ಉಪನಿಷದಗಳಲ್ಲಿ ’ಸತ್ಯಂ ವದ, ಧರ್ಮಂ ಚರ’ ಎಂದು ಹೇಳಿದೆ - ಧರ್ಮದ ಮಾರ್ಗದಲ್ಲೇ ನಮ್ಮ ಜೀವನವನ್ನು ನಡೆಸ ಬೇಕು. ಇದೇ ಮಾರ್ಗ ಸೂಚಿ. ಒಳಿತು ಮತ್ತು ಕೆಡುಕು - ಇವೆರಡನ್ನು ಬೇರ್ಪಡಿಸುವುದು ಧರ್ಮ. ನಮ್ಮ ದೇಶದ ಮೇಲಿನ ಹಲವಾರು ರೀತಿಯ ಆಕ್ರಮಣ ಅತ್ಯಾಚಾರಗಳು ಆದಾಗ ಅವುಗಳನ್ನು ಎದುರಿಸಿ ಹೋರಾಡಲು ಸಾಧ್ಯವಾದದ್ದು ನಮ್ಮ ಜನರಿಗೆ ಧರ್ಮದ ನಡೆತೆಯಿಂದ ಬಂದ ಶಕ್ತಿಯಿಂದಲೇ. ’ಧರ್ಮ’ ಎಂದರೆ ಗುಣವಂತನಾಗಿರುವುದು, ಬೇರೆಯವರಿಗೆ ಒಳಿತನ್ನು ಮಾಡುವುದು, ದಾನ ನೀಡುವುದು, ಕೆಡುಕು ಮಾಡದಿರುವುದು, ತನ್ನೊಳಗಿನ ಆತ್ಮಕ್ಕೆ ದ್ರೋಹ ಬಗೆಯದಿರುವುದು. ಲೋಕದಲ್ಲಿ ಮನುಜನು ಧರ್ಮದಿಂದ ದಾರಿತಪ್ಪಿದಾಗ ಭಗವಂತನೇ ಧರ್ಮದ ಅವತಾರ ತಾಳಿರುವನು. ’ರಾಮೋ ವಿಗ್ರಹವಾನ್ ಧರ್ಮ:’ - ಶ್ರೀರಾಮನು ಧರ್ಮದ ಪ್ರತೀಕ; ತನ್ನ ನಡೆತೆಯ ಮೂಲಕ ಧರ್ಮದ ಮಹತ್ವವನ್ನು ಪ್ರಪಂಚಕ್ಕೆ ಎತ್ತಿ ತೋರಿಸಿದನು. ಅಧರ್ಮದ ಮಾರ್ಗ ಬದುಕಲು ಬಹಳ ಸುಲಭವಾಗಿಯು ಮತ್ತು ಜಯಕೊಡುವುದಾಗಿ ಸಧ್ಯಕ್ಕೆ ಕಂಡರೂ, ಅಂತಿಮವಾಗಿ ಧರ್ಮಕ್ಕೆ ಜಯ ಎಂಬುದನ್ನು ಸಾರುವ ಅನೇಕ ಕಥೆಗಳು ನಮ್ಮ ಇತಿಹಾಸ ಪುರಾಣಗಳಿಲ್ಲಿವೆ -’ಸತ್ಯಮೇವ ಜಯತೇ’. ತಿರುವಳ್ಳುವರ್ ಅವರು ಬರೆದಿರುವ ತಮಿಳು ಭಾಷೆಯಲ್ಲಿರುವ ತಿರುಕ್ಕುರಳ್ ನಲ್ಲಿ -’ಒಬ್ಬನು ಧರ್ಮವನ್ನು ಆಚರಣೆ ಮಾಡದಿದ್ದರೆ ಅದು ಅವನಿಗೆ ಮಾತ್ರವಲ್ಲ ಸಮಾಜಕ್ಕು ಮತ್ತು ದೇಶಕ್ಕೂ ಹಾನಿ ಉಂಟುಮಾಡುತ್ತದೆ’ ಎಂದು ಹೇಳಿರುವರು.

ಆದಿ ಶಂಕರಾಚಾರ್ಯರು ಅದ್ವೈತ ಆಧ್ಯಾತ್ಮಿಕ ತತ್ವಗಳನ್ನು ಮಾತ್ರವಲ್ಲದೆ, ನಮ್ಮ ಭಾರತ ದೇಶಕ್ಕೆ ಅತ್ಯವಶ್ಯಕವಾದ ರಾಷ್ಟ್ರದ ಐಕ್ಯತೆಗೂ ಮಾರ್ಗದರ್ಶನ ನೀಡಿರುವರು. ಅವರು ತಮ್ಮ ಅಲ್ಪಕಾಲದ ಜೀವನದಲ್ಲಿ ಕನ್ಯಾಕುಮರಿಯಿಂದ ಕಾಶ್ಮೀರಕ್ಕೆ, ರಾಮೇಶ್ವರದಿಂದ ಕಾಶಿಗೆ ಮಾಡಿದ ಪಾದಯಾತ್ರೆಗಳು ನಮ್ಮ ಮನದಲ್ಲಿ ’ನಾವೆಲ್ಲಾ ಒಂದು’ ಎಂಬ ಐಕ್ಯ ಭಾವನೆಯನ್ನು ಮೂಡಿಸುತ್ತದೆ. ಕಾಶ್ಮೀರದಲ್ಲಿ ಇಂದಿಗೂ ಇರುವ ಶ್ರೀಶಂಕರ ಗುಡ್ಡ ಈ ಭಾವನೆಗೆ ಸಾಕ್ಷೀಭೂತವಾಗಿದೆ. ನಮ್ಮ ಸನಾತನ ಧರ್ಮಕ್ಕೆ ವಿರೋಧವಾದ ಶಕ್ತಿಗಳು ಅಧಿಕವಾದಾಗ ಅಂಥಹವರನ್ನು ವಾದದಲ್ಲಿ ಗೆದ್ದು ಧರ್ಮಮಾರ್ಗವನ್ನು ಪುನ: ಸ್ಥಾಪನೆ ಮಾಡಿದರು, ಹಾಗೂ ಷಣ್ಮತ ಸ್ಥಾಪನೆಯನ್ನೂ ಮಾಡಿದರು - ಗಾಣಪತ್ಯ (ಗಣಪತಿ ಆರಾಧನೆ), ಶೈವ (ಶಿವ ಆರಾಧನೆ), ಶಾಕ್ತ (ಶಕ್ತಿ ಆರಾಧನೆ), ಸೌರವ (ಸೂರ್ಯ ಆರಾಧನೆ), ವೈಷ್ಣವ (ವಿಷ್ಣು ಆರಾಧನೆ), ಕೌಮಾರ (ಸುಬ್ರಹ್ಮಣ್ಯ ಆರಾಧನೆ). ಇಂದು ಮೇಲ್ನೋಟಕ್ಕೆ ಮತ ಭಾಷೆ ಪಂಥ ಎಂದು ಹಲವಾರು ರೀತಿಯಲ್ಲಿ ವಿಭಿನ್ನತೆ ಕಂಡರೂ ಅಂದು ಅವರು ಬಿತ್ತಿದ ಷಣ್ಮತ ಆರಾಧನೆಯ ಬೀಜಗಳು ನಮ್ಮ ರಾಷ್ಟ್ರದ ಐಕ್ಯತೆಗೆ ಬುನಾದಿಯಾಗಿವೆ.

ನಮ್ಮದು ಪುರಾತನ ಸಂಸ್ಕೃತಿ. ಈ ಭೂಮಿ - ಋಷಿ ಕೃಷಿಗಳ ಭೂಮಿ - ಋಷಿಗಳು ಬಾಳಿದ ಮತ್ತು ಕೃಷಿ - ಬೇಸಾಯಾದ ಆಧಾರಿತ ಭೂಮಿ. ನಮ್ಮ ಧರ್ಮವು ವಿಶೇಷವಾದದ್ದು - ವಿಶಾಲ ಮನೋಭಾವನೆಯಿರುವುದು - ’ವಸುದೈವ ಕುಟುಂಬಕಂ’ ಮತ್ತು ’ ಸ್ವದೇಶೋ ಭುವನತ್ರಯಂ’ - ಈ ಭೂಮಿಯಲ್ಲಿರುವರೆಲ್ಲರೂ ಒಂದು ಕುಟುಂಬ, ಮೂರು ಲೋಕವೂ ನಮ್ಮ ದೇಶವೇ - ಎಂಬ ಭಾವನೆ. ನಮಗೆ ಭೌದ್ಧಿಕವಾಗಿ ಸಿರಿ ಸಂಪತ್ತಿಲ್ಲದಿರ ಬಹುದು, ಆದರೆ ನಮ್ಮ ಸಂಸ್ಕಾರ ಮತ್ತು ನಾಗರೀಕತೆ ಬಹಳ ಉನ್ನತವಾದದ್ದು. ನಮ್ಮ ದೇಶದ ಆತ್ಮವಿರುವುದೇ ನಮ್ಮ ಹಳ್ಳಿಗಳಲ್ಲಿ. ಆ ಗ್ರಾಮದ ಜನರ ಮುಗ್ಧತೆ, ಸರಳತೆ, ತೃಪ್ತಿಯ ಜೀವನ ಶೈಲಿ, ಪ್ರಕೃತಿಯೊಂದಿಗೆ ಅವರ ಸಹಬಾಳು - ಇವೆಲ್ಲವೂ ನಮ್ಮ ದೇಶದ ಜೀವ.

ನಮ್ಮ ಧರ್ಮವನ್ನು ಪ್ರಚಾರ ಮಾಡಿದಾಗ ಮಾತ್ರ ಪ್ರಪಂಚದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸುವುದು. ಈ ಭೂಮಿಯಲ್ಲಿಯ ಎಲ್ಲ ದೇಶಗಳಿಗೂ ಧರ್ಮದ ಆಧಾರದ ಮೇಲೆ ವಿಶ್ವಗುರುವಾಗಲು ಸಾಧ್ಯವಾಗುವುದೆಂದರೆ ಅದು ಭಾರತದಿಂದ ಮಾತ್ರ ಸಾಧ್ಯ. ಶಾಂತಿ ಮತ್ತು ಸ್ನೇಹಭಾವವನ್ನು ತುಂಬಿಸುವ ಆದಿ ಶಂಕರಾಚಾರ್ಯರ ಬೋಧನೆಗಳು ಬರೀ ನಮ್ಮ ದೇಶದ ಜನರಿಗೆ ಮಾತ್ರವಲ್ಲ ಅವು ಇಡೀ ಪ್ರಪಂಚದ ಎಲ್ಲ ದೇಶಗಳಿಗೂ ಅನ್ವಯಿಸುತ್ತವೆ.

ಇಂದಿನ ನಮ್ಮ ದೇಶದ 75ನೇ ವಾರ್ಷಿಕ ಸ್ವಾತಂತ್ರ ದಿನಾಚರಣೆಯ ಶುಭ ಸಂದರ್ಭದಲ್ಲಿ ಶ್ರೀ ಚಂದ್ರಮೌಳೀಶ್ವರರು ನಮ್ಮ ದೇಶದ ಎಲ್ಲರಿಗೂ ಅನುಗ್ರಹ ಮಾಡೆಲೆಂದು ಬೇಡುವೆವು.

ಧರ್ಮೋ ರಕ್ಷತಿ ರಕ್ಷಿತ:
Back to news page